ಟ್ರಿಪ್ಯಾನಸೋಮ
	ಏಕಕೋಶಿಗಳ ಗುಂಪಿನ (ಪ್ರೋಟೊeóÉೂೀವ) ಕಶಾಂಗಿ ವರ್ಗಕ್ಕೆ ಸೇರಿದ (ಮ್ಯಾಸ್ಟಿಗಾಫೊರ, ಫ್ಲಾಜೆಲೇಟ) ಹಾಗೂ ಕಶೇರುಕಗಳ ರಕ್ತದಲ್ಲಿ ಪರಾವಲಂಬಿಗಳಾಗಿರುವ ಜೀವಿಗಳು (ಹೀಮೋಫ್ಲಾಜೆಲೇಟ್ಸ್). ಪರಾವಲಂಬಿ ಜೀವನಕ್ಕೋಸ್ಕರ ಹೊಸ ಆತಿಥೇಯ ದೇಹಗಳ ಒಳಹೋಗಲು ರಕ್ತಹೀರುವ ಅಕಶೇರುಕಗಳು ಸಹಾಯಕವಾಗಿರುವುದು ಸಾಮಾನ್ಯ. ಬಹುವಾಗಿ ಇಂಥ ಮಧ್ಯವರ್ತಿ ಆತಿಥೇಯಗಳಲ್ಲಿ ಸ್ವಲ್ಪಮಟ್ಟಿಗೆ ಬೆಳೆದ ತರುವಾಯ ಮಾಮೂಲು ಆತಿಥೇಯ ಜೀವಿಯಲ್ಲಿ ತಮ್ಮ ಜೀವನವನ್ನು ಮುಂದುವರಿಸುತ್ತವೆ. ಸೂಕ್ಷ್ಮದರ್ಶಕದ ಉಪಯೋಗದ ಮೂಲಪುರುಷ ಎಂದು ಹೆಸರಾದ ಆಂಟೊನಿ ಫಾನ್ ಲೀವೆನ್ ಹೂಕ್ ಸುಮಾರು 300 ವರ್ಷಗಳಷ್ಟು ಹಿಂದೆಯೇ ಇವನ್ನು ಗುರುತಿಸಿದ್ದನೆಂದು ತೋರುತ್ತದೆ. 1880ರಲ್ಲಿ ಕುದುರೆನೊಣಗಳ ಕರುಳಿನಲ್ಲಿ ಇವನ್ನು ಗುರುತಿಸಿ ವಿವರಿಸಿದ. ಇವನು ನೋಡಿದ ಸೂಕ್ಷ್ಮಾಣುಗಳು ಬಹುಶಃ ಟ್ರಿಪ್ಯಾನಸೋಮ ಥೈಲೆರಿ ಎಂಬ ಪ್ರಭೇದದ ಬೆಳವಣಿಗೆಯ ಒಂದು ಹಂತವಾಗಿದ್ದಿರಬಹುದು. ಟ್ರೌಟ್‍ಮೀನುಗಳ ರಕ್ತದಲ್ಲಿ ವ್ಯಾಲೆನ್‍ಟಿನ್ನನೂ (1841) ಕಪ್ಪೆಗಳ ರಕ್ತದಲ್ಲಿ ಗ್ಲೂಗ್, ಮೇಯರ್, ಗ್ರೂಬಿ ಇವರು ಪ್ರತ್ಯೇಕವಾಗಿಯೂ (1842-43) ಈ ಸೂಕ್ಷ್ಮಾಣುಗಳಿರುವುದನ್ನು ಕಂಡು ವಿವರಿಸಿದರು. ಇವುಗಳಿಗೆ ಟ್ರಿಪ್ಯಾನಸೋಮ ಎಂದು ಹೆಸರಿಟ್ಟವನು ಗ್ರೂಬಿಯೇ, ಟಿಮೋತಿ ಲೆವಿಸ್ ಎಂಬಾತ (1878-79) ಭಾರತದ ಇಲಿಗಳ ರಕ್ತದಲ್ಲಿ ಪತ್ತೆಹಚ್ಚಿದ ಪ್ರಭೇದಕ್ಕೆ ಟ್ರೆ. ಲೆವೀಸಿಯೈ ಎಂದು ಹೆಸರಾಯಿತು. ಭಾರತದ ಕುದುರೆ ಮತ್ತು ಒಂಟೆಗಳಲ್ಲಿ ಸರ್ರ ಎಂಬ ರೋಗವನ್ನು ಟ್ರಿಪ್ಯಾನಸೋಮ ಉಂಟುಮಾಡುವುದೆಂದು ಗ್ರಿಫಿತ್ ಇವಾನ್ಸ್ (1880) ಎಂಬ ಪಶುವೈದ್ಯಾಧಿಕಾರಿ ತೋರಿಸಿದ್ದರಿಂದ ಆ ಪ್ರಭೇದಕ್ಕೆ ಟ್ರಿ. ಇವಾನ್ಸಿ ಎಂದು ಹೆಸರು ಬಂತು. 1894ರಲ್ಲಿ ಬ್ರೂಸ್ ಎಂಬಾತ ದಕ್ಷಿಣ ಆಫ್ರಿಕದ ಕಾಲ್ನಡೆಗಳಲ್ಲಿ ನಗಾನ ಬಂತು. 1894ರಲ್ಲಿ ಬ್ರೂಸ್ ಎಂಬಾತ ದಕ್ಷಿಣ ಆಫ್ರಿಕದ ಕಾಲ್ನಡೆಗಳಲ್ಲಿ ನಗಾನ ಎಂಬ ತೀವ್ರಮಾರಕ ರೋಗವನ್ನು ಉಂಟುಮಾಡುವ ಟ್ರಿಪ್ಯಾನಸೋಮದ ಪ್ರಭೇದವನ್ನು ಆವಿಷ್ಕರಿಸಿದ. ಇದನ್ನು ಟ್ರಿ. ಬ್ರೂಸೈ ಎಂದು ಕರೆಯಲಾಯಿತು.

	1894ರಲ್ಲಿ ಆಲ್ಜೀರಿಯದ ಕಾನ್‍ಸ್ಟೆನ್‍ಟೈನಿನಲ್ಲಿ ರೋಗೆಟ್ ಎಂಬಾತ ಡೌರಿನ್ ಎಂಬ ರೋಗದಿಂದ ನರಳುತ್ತಿರುವ ಕುದುರೆಗಳ ರಕ್ತದಲ್ಲಿ ಟ್ರಿಪ್ಯಾನಸೋಮ ಇರುವುದನ್ನು ತೋರಿಸಿ ಇದನ್ನು ಟಿ. ಈಕ್ವಿಪರ್ಡಮ್ ಎಂದು ಕರೆದ. ಕುದುರೆಗಳಲ್ಲಿ ಮಾಲ್ ಡಿ ಕೆಡೆರಾನ್ ರೋಗವನ್ನು ಉಂಟುಮಾಡುವ ಟ್ರಿ. ಈಕ್ವೈನಮ್ ಎಂಬ ಪ್ರಭೇದವನ್ನು ಎಲ್‍ಮಾಸಿಯಾನ್ ಎಂಬಾತ ಆವಿಷ್ಕರಿಸಿದ. ಮಾನವರಲ್ಲಿ ನಿದ್ರಾರೋಗವನ್ನು ಉಂಟುಮಾಡುವವು ಟ್ರಿಪ್ಯಾನಸೋಮಗಳು ಎಂಬುದು 1901ರಲ್ಲಿ ತಿಳಿಯಿತು (ಫೋರ್ಡ್). ಡಟ್ಟನ್ 1903ರಲ್ಲಿ ತಾನು ವ್ಯಾಸಂಗಿಸಿದ ನಿದ್ರಾರೋಗಿಕಾರಕ ಜೀವಿಗೆ ಟ್ರಿ. ಗ್ಯಾಂಬಿಯೆನ್ಸಿ ಎಂದು ಹೆಸರಿಟ್ಟ. ಟ್ರಾನ್ಸ್‍ವಿಟ್ ಎಂಬಲ್ಲಿ ಒಂದು ವಿಚಿತ್ರ ಪಿತ್ತಕೋಶರೋಗದಿಂದ ಥೈಲರ್ ತೋರಿಸಿದ (1902). ಈ ಪ್ರಭೇದಕ್ಕೆ ಟ್ರಿ. ಥೈಲರಿ ಎಂದೇ ಹೆಸರಾಯಿತು. ದಕ್ಷಿಣ ಅಮೆರಿಕದ ಮಕ್ಕಳಲ್ಲಿ ಒಂದು ವಿಚಿತ್ರ ವ್ಯಾಧಿಯನ್ನು ಉಂಟುಮಾಡುವ ಟ್ರಿ. ಕ್ರೂಸಿ ಪ್ರಭೇದ ಚಾಗಾಸನಿಂದ ಆವಿಷ್ಕರಿಸಲ್ಪಟ್ಟಿತು (1909). ಆ ವ್ಯಾಧಿಗೆ ಚಾಗಾಸನ ವ್ಯಾಧಿ ಎಂದೇ ಹೆಸರಿಡಲಾಯಿತು. ಮಾನವರಲ್ಲಿ ನಿದ್ರಾರೋಗಕಾರಕ ಟ್ರಿಪ್ಯಾನಸೋಮದ ಇನ್ನೊಂದು ಪ್ರಭೇದ ಟ್ರಿ. ರೋಡೀಸಿಯೆನ್ಸಿ ಎಂಬುದು ಸ್ವೀಫಾನ್ಸ್ ಎಂಬಾತನಿಂದ 1909ರಲ್ಲಿ ಆವಿಷ್ಕರಿಸಲ್ಪಟ್ಟಿತು. ಟ್ರಿಪ್ಯಾನಸೋಮವನ್ನು ವೈಜ್ಞಾನಿಕವಾಗಿ ಪ್ರಪ್ರಥಮವಾಗಿ 1909ರಲ್ಲಿ ಮಿನ್‍ಚಿನ್ ಎಂಬಾತ ವಿವರಿಸಿದ.

	ಟ್ರಿಪ್ಯಾನಸೋಮದ ಉದ್ದ ಸುಮಾರು 1/4 mm. ದೇಹ ನೀಳವಾಗಿದ್ದು ಚಪ್ಪಟೆಯಾದ ಕದಿರಿನ ಆಕಾರದಲ್ಲಿದೆ. ಎರಡು ತುದಿಗಳೂ ಚೂಪು. ಹೆಚ್ಚು ಚೂಪಾಗಿರುವ ಮುಂದಿನ ತುದಿಯಲ್ಲಿ ಚಾವಟಿಯಂತಿರುವ ಕಶವೂ (ಫ್ಲಾಜೆಲಮ್) ದೇಹ ಮಧ್ಯದಲ್ಲಿ ದೊಡ್ಡದಾದ ನ್ಯೂಕ್ಲಿಯಸೂ ಇವೆ. ಟ್ರಿಪ್ಯಾನಸೋಮದ ಹಿಂದಿನ ತುದಿಯ ಹತ್ತಿರ ಬುಡರೇಣು (ಬೇಸಲ್ ಗ್ರಾನ್ಯೂಲ್) ಎಂಬ ಒಂದು ಕಣ ಉಂಟು. ವಾಸ್ತವವಾಗಿ ಕಶ ಪ್ರಾರಂಭವಾಗುವುದು ಇದರಿಂದಲೇ. ಕಶಾಂಗ ಮುಂದಿನ ತುದಿಯನ್ನು ತಲುಪುವ ಅಂತರದಲ್ಲಿ ಒಂದು ಬಳುಕುಪಟಲ (ಅಂಡ್ಯುಲೇಟಿಂಗ್ ಮೆಂಬ್ರೇನ್) ಅದನ್ನು ದೇಹದುದ್ದಕ್ಕೂ ಅಂಟಿಸಿದೆ. ಕಶ ಅಲ್ಲಿಂದ ನಿರ್ಬಂಧಿತವಾಗಿ ಚಾಟಿಯಂತೆ ಮುಂದಿನ ತುದಿಯಿಂದ ಆಚೆಗೆ ಚಾಚಿಕೊಂಡಿದೆ. ಬುಡರೇಣುವಿನ ಕೆಳಗೆ ಕಶಾಧಾರಕಾಯವಿದ್ದು (ಪ್ಯಾರ ಬೇಸಲ್ ಬಾಡಿ) ಇವೆರಡೂ ಒಂದು ತಂತುವಿನಿಂದ ಜೋಡಿಸಲ್ಪಟ್ಟಿವೆ. ಈ ಒಟ್ಟುರಚನೆಗೆ ಚಲನಾಣು (ಕೈನೆಟೋಪ್ಲಾಸ್ಟ್) ಎಂದು ಹೆಸರು. ಚಾಟಿ, ಬಳುಕುಪಟಲಗಳು ಟ್ರಿಪ್ಯಾನಸೋಮದ ಚಲನೆಗೆ ಸಹಾಯಕ. ಟ್ರಿಪ್ಯಾನಸೋಮದ ಕೆಲವು ಪ್ರಭೇದಗಳಲ್ಲಿ ಕಶವೇ ಇರುವುದಿಲ್ಲ. ಟ್ರಿಪ್ಯಾನಸೋಮಗಳ ಸಂಖ್ಯಾಭಿವೃದ್ಧಿ ಆಗುವುದು ದ್ವಿವಿಭಜನೆ ರೀತಿಯಿಂದ (ಬೈನರಿ ಫಿಷನ್). ಎಳೆಯ ಜೀವಿ ಆತಿಥೇಯ ರಕ್ತವನ್ನು ಉಪಯೋಗಿಸಿಕೊಂಡು ಬೆಳೆದು ದೊಡ್ಡದಾದಮೇಲೆ ದೇಹದುದ್ದಕ್ಕೂ ಸೀಳಿ ಎರಡು ಎಳೆಯ ಜೀವಿಗಳಾಗಿ ರೂಪುಗೊಳ್ಳುತ್ತದೆ. ಟ್ರಿಪ್ಯಾನಸೋಮದಲ್ಲಿ ಅನೇಕ ಪ್ರಭೇದಗಳಿವೆ. ಸಸ್ತನಿಗಳನ್ನುಳಿದು ಇತರ ಕಶೇರುಕಗಳಲ್ಲಿ ಇರುವ ಪ್ರಭೇದಗಳು ಬಹುಶಃ ನಿರುಪದ್ರವಿಗಳು. ಸಸ್ತನಿಗಳಲ್ಲಿರುವ ಪ್ರಭೇದಗಳಲ್ಲಿಯೂ ಕೆಲವು ಮಾತ್ರ ರೋಗಕಾರಕಗಳು. ಟ್ರಿಪ್ಯಾನಸೋಮಗಳಿಂದ ಉಂಟಾದ ರೋಗ ಸ್ಥಿತಿಗಳಿಗೆಲ್ಲ ಟ್ರಿಪ್ಯಾನಸೋಮೈಯಸಿಸ್ ಎಂದು ಸಾಮಾನ್ಯ ಹೆಸರು. ಬೇರೆ ಬೇರೆ ಪ್ರಭೇದಗಳ ಸೋಂಕಿಗೆ ಬೇರೆ ಬೇರೆ ಹೆಸರನ್ನು ಕೊಟ್ಟಿದ್ದಾರೆ.
(ನೋಡಿ- ಟ್ರಿಪ್ಯಾನಸೋಮೈಯಸಿಸ್)
(ನೋಡಿ- ಜೋಗರಿಕೆ-ಬೇನೆ) 						(ಎಸ್.ಬಿ.ಎಂ.; ಕೆ.ಎನ್.ಪಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ